ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಜೋಡಾಟ ವೈಭವದಲ್ಲಿ ಇತಿಹಾಸದ ಮೆಲುಕು

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜೂನ್ 1 , 2015
ಜೂನ್ 1, 2015

ಜೋಡಾಟ ವೈಭವದಲ್ಲಿ ಇತಿಹಾಸದ ಮೆಲುಕು

ಕೂಡ್ಲು : ಒಂದು ಕಾಲದ ಕೃಷಿ ಸಂಸ್ಕೃತಿಯ ಪ್ರತೀಕವೆನಿಸಿ, ಶ್ರಮಿಕ ರಂಗಭೂಮಿಯ ಸ್ಪರ್ಧಾತ್ಮಕ ಮನೋರಂಜನೆಯಾಗಿ ಮೆಯ್ಯೊಡೆದ ಜೋಡಾಟ ಎಂಬ ಪರಿಕಲ್ಪನೆ ಆ ಬಳಿಕ ಪ್ರತಿಷ್ಠೆಯ ಪ್ರತೀಕವಾಗಿ ತೆಂಕುತಿಟ್ಟು ಯಕ್ಷಗಾನದಲ್ಲಿ ಮೆರೆದದ್ದು ಒಂದು ಕಾಲಘಟ್ಟದ ಇತಿಹಾಸ. ಈ ಪರಂಪರೆಗೆ ವರ್ತಮಾನದಲ್ಲೂ ಪ್ರೋತ್ಸಾಹ ಮತ್ತು ಪ್ರೇಕ್ಷಕರು ಕುಂದಿಲ್ಲ ಎಂಬುದಕ್ಕೆ ಮತ್ತೆ ಜೋಡಾಟಗಳು ವಿಜೃಂಭಿಸತೊಡಗಿರುವುದೇ ನಿದರ್ಶನ. ಕಾಸರಗೋಡಿನ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಮುಂದಿನ ಗದ್ದೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವರ್ಷಕ್ಕೊಂದರಂತೆ ಜೋಡಾಟಗಳು ನಡೆಯುತ್ತಲೇ ಬಂದಿರುವುದು ಇದಕ್ಕೊಂದು ತಾಜಾ ಉದಾಹರಣೆ. ಯಾವ್ಯಾವುದೋ ಕಾರಣಕ್ಕೆ ಹರಕೆ ಹೊತ್ತ ಭಕ್ತರ ಸೇವಾ ಬಾಬ್ತು ನಡೆಯತೊಡಗಿದ ಹರಕೆ ಜೋಡಾಟಗಳು ಕೂಡ್ಲು ಕುತ್ಯಾಳ ಕ್ಷೇàತ್ರದಂಗಳದಲ್ಲಿ ಮತ್ತೆ ವೈಭವಿಸತೊಡಗಿದಾಗ ಒಂದೆಡೆ ಗತವೈಭವದ ಜೋಡಾಟದ ಇತಿಹಾಸದ ಪುನರ್‌ ಮೆಲುಕು, ಮತ್ತೂಂದೆಡೆ ಯುವ ಪೀಳಿಗೆಯ ಹೊಸ ಪ್ರೇಕ್ಷಕರಿಗೆ ಮತ್ತು ವರ್ತಮಾನದ ಕಲಾವಿದರಿಗೆ ಈ ಕಾಲದ ಜೋಡಾಟದ ಜೋಷ್‌...!

ಕಳೆದ ಮೇ 9ರಂದು ಕೂಡ್ಲಿನಲ್ಲಿ ಮಲ್ಲ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಮತ್ತು ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಮಂಡಳಿಯವರ ನಡುವೆ ಮತ್ತೂಮ್ಮೆ ಜೋಡಾಟ. ಪ್ರಸಂಗ ಯಥಾವತ್‌ ದೇವಿಮಹಾತೆ. ಸಂಯೋಜಕರ ಪ್ರಚಾರದ ಕೊರತೆಯಿಂದ ಭಾರೀ ಪ್ರೇಕ್ಷಕರ ಕೊರತೆ ಎನಿಸಿದರೂ ಜೋಡಾಟದ ಸುದ್ದಿ ತಿಳಿದು ಬಂದ ಯಕ್ಷರಸಿಕರು ಸಾಕಷ್ಟು ಸಂಖ್ಯೆಯಲ್ಲೇ ನೆರೆದಿದ್ದರು ಎಂಬುದೇ ವಿಶೇಷ. ಇದು ಹೆಸರಿಗಷ್ಟೇ ಪ್ರಾದೇಶಿಕ ಬಯಲಾಟ ಮೇಳಗಳ ನಡುವಣ ಜೋಡಾಟ. ಎರಡೂ ಮೇಳಗಳಲ್ಲಿ ಪ್ರಮುಖ ವೇಷ ಗಳನ್ನು ನಿರ್ವಹಿಸಿದವರು ವೃತ್ತಿ ಮೇಳಗಳ ಪ್ರಸಿದ್ಧ ಕಲಾವಿದರು. ಹರಕೆಯ ಜೋಡಾಟವಾದರೂ ಜೋಡಾಟ ಎಂದ ಮೇಲೆ ಆಟದೊಳ ಗೊಂದು ಸ್ಪರ್ಧೆ ಸಹಜ. ಇದು ಮಾತಿನಲ್ಲಿ ಮೆರೆಯುವ ಆಟವಲ್ಲ, ಇಲ್ಲಿ ಕುಣಿತ ವೈವಿಧ್ಯಗಳೇ ಎಲ್ಲ ಎನ್ನುವಂತಿಲ್ಲ, ಅದಕ್ಕಿಂತ ಮಿಗಿಲಾಗಿ ಭಾಗವತಿಕೆ ಮತ್ತು ಭಾಗವತರೇ ಜೋಡಾಟದ ಕೇಂದ್ರ ಬಿಂದು. ಇಡೀ ಆಟವನ್ನು ದಾಟಿಸುವುದೇ ಅವರ ಸಾಮರ್ಥ್ಯದ ಏರು ಗತಿಯ ಹಾಡುಗಾರಿಕೆ ಮತ್ತು ರಂಗದ ತಂತ್ರಗಾರಿಕೆ. ಈ ತಂತ್ರಗಾರಿಕೆಗಳನ್ನು ಯಶಸ್ವಿಯಾಗಿ ಪ್ರಯೋಗಿಸುವವರು ಜೋಡಾಟದಲ್ಲಿ ಮೆರೆಯುವುದು ಸಹಜ ಎಂಬುದು ಕಳೆದ ನಾಲ್ಕೈದು ಜೋಡಾಟಗಳಿಂದ ವೇದ್ಯ.

ಜೋಡಾಟದಲ್ಲಿ ಯಾರು ಮೇಲುಗೈ ಸಾಧಿಸಿದರು, ಯಾರು ಮುಗ್ಗರಿಸಿದರು ಎಂಬುದು ಪ್ರೇಕ್ಷಕರಾಡಿಕೊಳ್ಳುವ ಮಾತಾದರೂ ಹರಕೆಯ ಜೋಡಾಟವಾದುದರಿಂದ ಗೋಚರದ ಸ್ಪರ್ಧೆ ಇರಲಿಲ್ಲ. ಅಗೋಚರವಾಗಿ ಕಲಾವಿದರ ನಡುವೆ ತಮ್ಮನ್ನು ತಾವು ಬಿಟ್ಟುಕೊಡದ, ಪಟ್ಟುಬಿಡದ ಸ್ಪರ್ಧಾತ್ಮಕ ಪ್ರದರ್ಶನದಿಂದ ಜೋಡಾಟ ಕಳೆಗಟ್ಟಿದೆ ಎಂಬುದೇ ಪ್ರೇಕ್ಷಕರ ಖುಷಿ, ರಂಜನೆ.

ಮಲ್ಲ ಮೇಳದ ಖಾಯಂ ಕಲಾವಿದರ ಹೊರತಾಗಿ, ಅತಿಥಿ ಕಲಾವಿದರಾಗಿ ಡಾ| ಶ್ರೀಧರ ಭಂಡಾರಿ (ವಿಷ್ಣು), ಚಂದ್ರಶೇಖರ ಧರ್ಮಸ್ಥಳ- ದಿವಾಕರ ರೈ ಸಂಪಾಜೆ (ಚಂಡ-ಮುಂಡ), ರಾಕೇಶ್‌ ರೈ ಅಡ್ಕ (ರಕ್ತಬೀಜ), ನಿಡುವಜೆ ಶಂಕರ ಭಟ್‌(ಚೆಂಡೆ) ಪಾಲ್ಗೊಂಡು ವಿಜೃಂಭಿಸಿದರೆ ಕೂಡ್ಲು ಮೇಳದಲ್ಲಿ ಐವರು ಭಾಗವತರ ಸಾಲಿನಲ್ಲಿ ಶಿವಶಂಕರ ಬಲಿಪ ಮತ್ತು ಸಿರಿಬಾಗಿಲು ರಾಮಕೃಷ್ಣ ಮಯ್ಯರು ಜೋಡಾಟದ ಸ್ಪೆಷಲಿಸ್ಟ್‌ ಭಾಗವತರೆಂಬುದನ್ನು ಮತ್ತೂಮ್ಮೆ ಸಾಬೀತು ಪಡಿಸಿದರು. ಕೂಡ್ಲು ಮೇಳದಲ್ಲಿ ಅತಿಥಿ ಕಲಾವಿದರಾಗಿ ಮಹೇಶ್‌ ಸಾಣೂರು (ಶ್ರೀದೇವಿ), ಉಮೇಶ್‌ ಕುಪ್ಪೆಪದವು (ಮಹಿಷಾಸುರ), ಶಶಿಧರ ಕುಲಾಲ್‌- ರಕ್ಷಿತ್‌ ಪಡ್ರೆ (ಚಂಡ-ಮುಂಡ), ಶಬರೀಶ ಮಾನ್ಯ (ಶುಂಭ), ಸುಬ್ರಾಯ ಹೊಳ್ಳ (ರಕ್ತಬೀಜ), ಲೋಕೇಶ್‌ ಮುಚ್ಚಾರು (ಯಕ್ಷ); ಹಿಮ್ಮೇಳದಲ್ಲಿ ಲಕ್ಷ್ಮೀನಾರಾಯಣ ಅಡೂರು, ಅಡೂರು ಹರೀಶ್‌ ರಾವ್‌ ಮೊದಲಾದವರು ಪಾಲ್ಗೊಂಡು ಪ್ರತಿಭಾ ಸಮರ್ಪಣೆಯಿಂದ ಜೋಡಾಟಕ್ಕೆ ರಸವೇರಿಸಿದರು. ಉಳಿದಂತೆ ಮಲ್ಲ ಮತ್ತು ಕೂಡ್ಲು ಮೇಳದ ಹವ್ಯಾಸೀ ಕಲಾವಿದರೇ ಪಾಲ್ಗೊಂಡು ವಿಜೃಂಭಿಸಿದ ಜೋಡಾಟ ಮತ್ತೆ ಕೂಡ್ಲಿನ ಜೋಡಾಟದ ಇತಿಹಾಸ ವೈಭವವನ್ನು ಪುನರ್‌ ಮೆಲುಕುವಂತೆ ಮಾಡಿದೆ.

ಜೋಡಾಟ ಒಂದು ಗುಲ್ಲೆಂಬುದು ನಿಜ. ಆದರೆ ಉಭಯ ರಂಗಸ್ಥಳಗಳ ಏಕಕಾಲದ ಆಟದಲ್ಲೂ ಕಲಾತ್ಮಕತೆ ಮೆರೆಸಲು ಸಾಧ್ಯವಿದೆ ಎಂಬುದನ್ನು ಕೂಡ್ಲು ಜೋಡಾಟ ತೋರಿಸಿಕೊಟ್ಟಿದೆ. ಇಲ್ಲಿ ಕಲಾವಿದನ ಸೊಂಟತ್ರಾಣ ಮತ್ತು ದೈಹಿಕ ಸಾಮರ್ಥ್ಯವೇ ಬಂಡವಾಳವಾಗಿದ್ದು ರಂಗದಲ್ಲಿ ಕಲಾವಿದನನ್ನು ಮಾತನಾಡಲು ಬಿಡದೇ ಅಭಿನಯ ಸಹಿತ ನಾಟೊತ್ಕರ್ಷ ಗಳನ್ನು ಪ್ರತಿಬಿಂಬಿಸಿ ಪದ್ಯದ ಮೇಲೆ ಪದ್ಯ ಕೊಟ್ಟು ಪದ್ಯದಲ್ಲೇ ಆಟವನ್ನು ಮೆರೆಸುವುದು ಜಾಣ್ಮೆ. ಭಾಗವತರುಗಳು ಪರಸ್ಪರ ತಮ್ಮ ಪದ್ಯ ಕೇಳಿಸಬೇಕೆಂದು ಬಯಸುವುದು, ಒಬ್ಬರ ಪದ್ಯ ಕೇಳಿಸ ದಂತೆ ಮತ್ತೂಬ್ಬರು ಪ್ರಯತ್ನಿಸುವುದೆಲ್ಲ ಜೋಡಾಟದ ಭಾಗವೇ ಆದರೂ ಜೋಡಾಟ ವೊಂದರ ಯಶಸ್ಸಿನ ಮೂಲಮಂತ್ರವೇ ಗಟ್ಟಿಯಾದ ಹಿಮ್ಮೇಳ ಎಂಬುದು ಮತ್ತೂಮ್ಮೆ ಸಾಬೀತಾಗಿದೆ.

ಮೇಳಗಳು ಮನೆತನಗಳ ಪ್ರತಿಷ್ಠೆಯ ಸಂಕೇತವಾಗಿದ್ದ ದಿನಗಳಲ್ಲಿ ಸ್ಪರ್ಧಾತ್ಮಕ ಜೋಡಾಟಗಳನ್ನು ನಡೆಸುವುದು, ಮೆರೆದ ಕಲಾವಿದರಿಗೆ ಚಿನ್ನದ ಉಡುಗೊರೆ ಯಿತ್ತು ಪುರಸ್ಕರಿಸುವುದೆಲ್ಲಾ ನಡೆದಿತ್ತು. ಆದರೆ ವರ್ತಮಾನದಲ್ಲಿ ಸ್ಪರ್ಧೆಯ ಬದಲು ಜೋಡಾಟಗಳು ಹರಕೆಯ ರೂಪದಲ್ಲಿ ನಡೆಯತೊಡಗಿದ್ದು, ಅಭಿಮಾನಿ ಗಳೇ ಪ್ರೋತ್ಸಾಹಕರಾಗಿ ಕಣದಲ್ಲಿ ಕಾಣಿಸಿಕೊಂಡು ಆಟವನ್ನು ಮೆರೆಸುತ್ತಾರೆ. ಜೋಡಾಟ ಕೇವಲ ರಂಗಸ್ಥಳದ ಆಟವಷ್ಟೇ ಅಲ್ಲ. ಮಹಿಷಾಸುರ, ಚಂಡ ಮುಂಡರು ಮುಂತಾದ ವೇಷಗಳೆಲ್ಲ ಸಭೆಯ ನಡುವೆ ಸಾಕಷ್ಟು ಕುಣಿದು ಸರ್ಕಸ್‌ ತೋರಿಸಿ ಕಾಲಹರಣ ಮಾಡುತ್ತವೆ! ಒಂದು ಕಾಲದಲ್ಲಿ ಜೋಡಾಟದಲ್ಲಿ ವೇಷ ಧರಿಸಿದ ಕಲಾವಿದರೆಲ್ಲರೂ ಬೆಳಗ್ಗೆ ರಕ್ತಬೀಜನ ಬೀಜಗಳಾಗಿ ರಂಗಕ್ಕೆ ಬರಬೇಕೆಂಬ ಸಂಪ್ರದಾಯವಿತ್ತು. ಈ ಸಂಪ್ರದಾಯವನ್ನು ಮುರಿಯದೆ ಕೂಡ್ಲು ಜೋಡಾಟದಲ್ಲೂ ಬೆಳಗ್ಗಿನ ಹೊತ್ತು ಅನೇಕ ಬೀಜಾದಿಗಳು (ವೇಷ) ಸಭೆಯಲ್ಲಿ ಕುಣಿದಾಗ ಅದೊಂದು ವೇಷಗಳ ಜಾತ್ರೆಯಂತೆ ಕಂಡುಬಂತು! ಪ್ರೇಕ್ಷಕರಿಗೆ ವೈಭವದ ಉನ್ಮಾದವನ್ನುಣಿಸುವ ಜೋಡಾಟಗಳು ಇನ್ನಷ್ಟು ನಡೆಯಲಿವೆ ಎಂಬುದೇ ಕುತೂಹಲದ ಸುದ್ದಿ.







ಕೃಪೆ : http://udayavani.com




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ